ದಾರಾ
 	ಭಾರತದ ನೆರೆಯ ಸಮುದ್ರಗಳ ಮತ್ತು ನದೀಮುಖಗಳಲ್ಲಿನ ಮೀನುಗಾರಿಕೆಯಲ್ಲಿ ಮುಖ್ಯವಾದ ಒಂದುಬಗೆಯ  ಮೀನು.  ಪಾಲಿಡ್ಯಾಕ್ಟಿಲಸ್ ಇಂಡಿಕಸ್ ಇದರ ಶಾಸ್ತ್ರೀಯ ಹೆಸರು.  ಇದು ಭಾರತದಿಂದ ಮಲೇಷಿಯ, ಆಸ್ಟ್ರೇಲಿಯ ಖಂಡದವರೆಗೆ ವ್ಯಾಪಿಸಿದೆ.  ಭಾರತದ ಪಶ್ಚಿಮ ಕರಾವಳಿಯಲ್ಲಿ, ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರದೇಶಗಳ ನೆರೆಯ ಸಮುದ್ರದಲ್ಲಿ ದಾರಾ ಮೀನುಗಾರಿಕೆ ಪ್ರಮುಖವಾಗಿದೆ.

	ದಾರಾ ಪಾಲಿನೀಮಿಡೀ ಕುಟುಂಬಕ್ಕೆ ಸೇರಿದೆ.  ಈ ಕುಟುಂಬದ 6 ಪ್ರಭೇದಗಳು ಭಾರತದ ಸಮುದ್ರಗಳಲ್ಲಿ ದೊರೆಯುವುದಾದರೂ ಮೀನುಗಾರಿಕೆ ಉದ್ಯಮದಲ್ಲಿ ಮುಖ್ಯವಾಗಿರುವುದು ದಾರಾ ಮೀನು ಮಾತ್ರ.

	ಸಮುದ್ರದ ತಳದಲ್ಲಿ ಸಾಧಾರಣವಾಗಿ ವಾಸಿಸುವ ಈ ಮೀನು ಇತರ ಸಣ್ಣ ಮೀನುಗಳನ್ನೂ ಸೀಗಡಿಗಳನ್ನೂ ಆಹಾರವಾಗಿ ಸೇವಿಸುತ್ತದೆ.  ಆದರೆ ದಾರಾ ಮರಿಗಳಿಗೆ ಮಾತ್ರ ಕಠಿಣ ಚರ್ಮಿಗಳೇ ಪ್ರಮುಖ ಆಹಾರ.  ಸಮುದ್ರದ ತಳದಲ್ಲಿನ ಕೆಸರಿನಲ್ಲಿ ವಾಸಿಸುವ ದಾರಾ ಮೀನಿನ ಕೈರೆಕ್ಕೆಯ ಅಕ್ಕಪಕ್ಕಗಳಲ್ಲಿರುವ ಎಳೆಗಳು ಸ್ವರ್ಶೆಂದ್ರಿಯಗಳಾಗಿ ಆಹಾರ ಸಂಪಾದನೆಯಲ್ಲಿ ಬಳಕೆಯಾಗುತ್ತವೆ ಎಂದು ನಂಬಲಾಗಿದೆ.  ಈ ಎಳೆಗಳು ಪಾಲಿನೀಮಿಡೀ ಕುಟುಂಬದ ಮೀನುಗಳ ಮುಖ್ಯ ಲಕ್ಷಣಗಳಲ್ಲೊಂದು.

	ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ನದೀಮುಖಗಳಲ್ಲಿ ಇದು ಮೊಟ್ಟೆ ಇಡುವುದು.

	ಟ್ರಾಲ್ ಬಲೆಗಳನ್ನು ಬಳಸಿ ದಾರಾ ಮೀನನ್ನು ಬೇಟೆಯಾಡಲಾಗುವುದು.  ಸಂಚಿ (ಡೋಲ್) ಬಲೆಗಳನ್ನೂ ವಾಘರ್‍ಜಾಲ್ ಎನ್ನುವ ಕಿವಿರು ಬಲೆಯನ್ನೂ ಈ ಮೀನಿನ ಬೇಟೆಗಾಗಿ ಉಪಯೋಗಿಸುವುದುಂಟು.  ಗಾಳದಿಂದಲೂ ದಾರಾ ಮೀನನ್ನು ಹಿಡಿಯುವುದಿದೆ.
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
						(ಸಿ.ಜಿ.ಕೆ.)